ಖಡೀಯ

ಭಾರತದ ಭಾಷಾ ಪರಿವಾರಗಳಲ್ಲೊಂದಾದ ಮುಂಡವರ್ಗಕ್ಕೆ ಸೇರಿದ ಒಂದು ಭಾಷೆ. ಇಂದಿಗೂ ಇದು ಕೇವಲ ಆಡುನುಡಿಯಾಗಿ ಉಳಿದಿದೆ. ಈ ಭಾಷೆಯನ್ನು ಆಡುವವರು ಬಹುಮಟ್ಟಿಗೆ ಬೇಸಾಯವನ್ನು ಅವಲಂಬಿಸಿರುವರು. ಉತ್ತರ ಭಾರತದ ಬಿಹಾರ ಪ್ರಾಂತ್ಯದ ಛೋಟಾನಾಗಪುರದ ಜಿಲ್ಲೆಯ ರಾಂಚಿಯ ಸುತ್ತಮುತ್ತ ಇವರು ಹೇರಳವಾಗಿ ಕಂಡುಬರುತ್ತಾರೆ. ಸುಮಾರು 1,60,000 ಜನ ಭಾಷೆಯನ್ನು ಆಡುತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಈ ಜನರ ಅಕ್ಕಪಕ್ಕಗಳಲ್ಲಿ ಆರ್ಯಭಾಷಾವರ್ಗದ ಭಾಷೆಗಳ ಪ್ರಾಬಲ್ಯವಿರುವುದರಿಂದ ಅವುಗಳ ಪ್ರಭಾವ ಇದರ ಮೇಲೆ ಆಗಿ ದಿನದಿನಕ್ಕೂ ಇದರ ರೂಪದಲ್ಲಿ ಮಾರ್ಪಾಡುಗಳಾಗುತ್ತಿವೆಯೆಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಈ ಭಾಷೆಯಲ್ಲಿ ಧೆಲ್ಕಿ ಖಡಿಯ ಮತ್ತು ದುಧ್ ಖಡಿಯ ಎಂಬ ಎರಡು ಪ್ರಭೇದಗಳಿರುವುದಾಗಿ ತಿಳಿದುಬರುತ್ತದೆ. ಇತ್ತೀಚೆಗೆ ಎಚ್. ಎಸ್. ಬಿಳಿಗಿಯವರು ಈ ಭಾಷೆಯನ್ನು ಆಧುನಿಕ ಭಾಷಾ ವಿಜ್ಞಾನಕ್ಕನುಗುಣವಾಗಿ ವ್ಯಾಸಂಗಮಾಡಿದ್ದಾರೆ.

	ಇದರ ಸ್ವರೂಪವನ್ನು ಕುರಿತು ಕೆಲವು ಮುಖ್ಯಾಂಶಗಳನ್ನು ಇಲ್ಲಿ ಹೇಳಬಹುದು.

	(1) ಖಡಿಯ ಭಾಷೆಯ ಸ್ವರಗಳಲ್ಲಿ ಹ್ರಸ್ವದೀರ್ಘಗಳೆಂಬ ಭೇದಗಳಿಲ್ಲ. ಅವು ಸ್ವನ ಪ್ರಭೇದಗಳಾಗಿ ಕಂಡುಬರುತ್ತವೆಯೇ ವಿನಾ ಪ್ರತ್ಯೇಕ ವರ್ಣಗಳಾಗಿ ತೋರಿ ಬರುವುದಿಲ್ಲ.

	(2) ವ್ಯಂಜನಗಳಲ್ಲಿ ಕ ಚ ಟ ತ ಪ ವರ್ಗಗಳಲ್ಲಿ ಅಘೋಷ, ಘೋಷಗಳು, ಅಲ್ಪಪ್ರಾಣ, ಮಹಾಪ್ರಾಣಗಳಿರುವುದಲ್ಲದೆ, ಕ್ ಚ್ ಟ್ ಮತ್ತು ಪ್ ಎಂಬ ಮತ್ತೊಂದು ವರ್ಣವರ್ಗ ಉಚ್ಚಾರಣಾ ವೈಪರೀತ್ಯದಿಂದ ಮುಂಡವರ್ಗಕ್ಕೆ ವಿಶಿಷ್ಟವೆನ್ನಿಸಿ ತೋರಿ ಬರುತ್ತದೆ. ಅನುನಾಸಿಕವರ್ಗದಲ್ಲಿ ಣ ಕಾರಕ್ಕೆ ಪ್ರತ್ಯೇಕವಾದ ಅಸ್ತಿತ್ವವಿಲ್ಲ. ಅದು ನಕಾರದ ಒಂದು ಸ್ವನಪ್ರಭೇದವಾಗಿ ಪ್ರಯೋಗವಾಗುತ್ತದೆ.

	(3) ಆಕೃತಿಮಾಗಳಲ್ಲಿ ನಾಮಪದಗಳು, ಕ್ರಿಯಾಪದಗಳು, ಸ್ಥಾನನಿರ್ದೇಶಕಗಳು, ಕ್ರಿಯಾವಿಶೇಷಣಗಳು, ಆಶ್ಚರ್ಯಸೂಚಕಗಳು, ಸಂಖ್ಯಾವಾಚಕಗಳು, ಸಮುಚ್ಚಯಗಳು ಮೊದಲಾದವು ಕಂಡುಬರುತ್ತವೆ. ಆಕೃತಿಮಾಗಳು ರೂಪಪಡೆಯುವಲ್ಲಿ ಉಪಸರ್ಗ, ಅಂತಃಸರ್ಗ, ಅಂತ್ಯಸರ್ಗ, ದ್ವಿತ್ವ, ಆಂತರಿಕ ಪರಿವರ್ತನೆ ಮೊದಲಾದವು ಕಂಡುಬರುತ್ತವೆ. ಆದರೂ ಆಕೃತಿಮಾಗಳಲ್ಲಿ ರೂಪಪರಿವರ್ತನೆ ಬಹಳ ವಿರಳವೆನ್ನಬಹುದು.

ಖಡಿಯ ಭಾಷೆಯಲ್ಲಿ ಬಳಕೆಯಾಗುವ ವಾಕ್ಯಗಳನ್ನು ಮುಖ್ಯವಾಗಿ ಪ್ರಧಾನವೆಂದೂ ಉಪಪ್ರಧಾನವೆಂದೂ ಎರಡು ಗುಂಪುಗಳನ್ನಾಗಿ ವರ್ಗೀಕರಿಸಬಹುದು. ಪ್ರಧಾನವರ್ಗಕ್ಕೆ ಸೇರಿದ ವಾಕ್ಯರಚನೆಯಲ್ಲಿ ಒಂದು ಮುಖ್ಯವಾದ ವಾಕ್ಯಖಂಡ ನಿಯತವಾಗಿ ಬರುತ್ತದೆ. ಅಲ್ಲದೆ, ಸರಳ, ಮಿಶ್ರ ಮತ್ತು ಸಂಯುಕ್ತ ವಿಧಾನಗಳೂ ತೋರಿಬರುತ್ತವೆ. ಮುಖ್ಯವಾದ ವಾಕ್ಯಖಂಡ ಉಪಪ್ರಧಾನ ವಾಕ್ಯರಚನೆಯಲ್ಲಿ ಕಂಡುಬರುವುದಿಲ್ಲ. 				
(ವಿ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ